ದೇವೇಂದ್ರಮುನಿ
ಸು. ಕ್ರಿ. ಶ. 1200.  ಜೈನಕವಿ. `ಬಾಲಗ್ರಹ ಚಿಕಿತ್ಸೆ ಎಂಬ ಶಾಸ್ತ್ರಗ್ರಂಥದ ಕರ್ತೃ.  ಸದ್ಯಕ್ಕೆ ಈ ಕೃತಿಯೇ ಈ ವಿಷಯವನ್ನು ಕುರಿತ ಮೊದಲ ಗ್ರಂಥ.  ಇದರಲ್ಲಿ ಬಾಲಗ್ರಹದ ಲಕ್ಷಣ ಹಾಗೂ ಚಿಕಿತ್ಸೆಗಳು ಇವೆ.  ಆಗತಾನೇ ಹುಟ್ಟಿದ ಮಗುವಿನಿಂದ ಹಿಡಿದು 12-14 ವರ್ಷಗಳ ವರೆಗಿನ ಮಕ್ಕಳಿಗೆ ಬಂದೊದಗುವ ಕಾಯಿಲೆಗಳಿಗೆ ಒಂದೊಂದು ಗ್ರಹಕಾಟ ಕಾರಣವೆಂದು ವಿವರಿಸಿ ಅದಕ್ಕೆ ಶಾಸ್ತ್ರೋಕ್ತವಾದ ಪೂಜೆ ಪುನಸ್ಕಾರಗಳಿಂದ ಶಾಂತಿಮಾಡುವ ಕ್ರಮವನ್ನು ಇಲ್ಲಿ ವರ್ಣಿಸಲಾಗಿದೆ.
ಉದಾಹರಣೆ : ಜ್ವರ ಬರುವುದು ವಾಂತಿಯಾಗುವುದು ಹೊಟ್ಟೆ ನೋಯುವುದು ಅನ್ನ ಒಲ್ಲದು ಕಣ್ಣು ನೋಯುವುದು ತುಟಿ ಒಣಗುವುದು ತಾಪ ಹೆಚ್ಚಾಗಿರುವುದು - ಇವಕ್ಕೆ ಚಿಕಿತ್ಸೆ ಉದ್ದಿನ ಹಿಟ್ಟಿನಲ್ಲಿ ಸ್ತ್ರೀ ಪುತ್ಥಳಿಯಂ ಮಾಡಿ ಖಂಡೆಯಮಂ ಹಿಡಿಯಿಸಿ ನೀವಿ ವಸ್ತ್ರವನುಡಿಸಿ ಕೆಂಪಿನ ಗಂಧಾ ಕೆಂಪಿನಕ್ಷತೆ ಕೆಂಪಿನ 5 ಬಗೆ ಪುಷ್ಪಧೂಪದೀಪ 4 ಪಟ 4 ತಾಂಬೂಲ ಕಾಯಿ ಬಾಳೆಹಣ್ಣು ಮೊಸರು ಅನ್ನ ಕಜ್ಜಾಯ 10 ಉಂಡಲಿಗೆ 10... ನೀರಿನಿಂದ ಪ್ರೋಕ್ಷಣಿಯಂ ಮಾಡಿ ಪೂಜಿಸಿ ಅರ್ಚಿಸಿ ನೈವೇದ್ಯಮಂ ಮಾಡಿ ಕರ್ಪೂರದಾರತಿಯನ್ನೆತ್ತಿ ಊರಿಗೆ ಪಶ್ಚಿಮವಾಗಿ 3 ದಿನ ಬಲಿಯಂ ಹಾಕುವುದು - ಹೀಗೆ ಪೂಜೆ ಮಾಡಿ ಬಳಿಕ ಸಂಬಂಧಪಟ್ಟ ಗ್ರಹವನ್ನು ಆಹ್ವಾನಿಸಿ ಅದು ಬಾಲಕನನ್ನು ಬಿಟ್ಟುಹೋಗುವಂತೆ ಹೇಳಿ ಬ್ರಾಹ್ಮಣರಿಗೆ ದಾನಗಳನ್ನು ಕೊಟ್ಟರೆ ಗ್ರಹಶಾಂತಿಯಾಗುತ್ತದೆ ಎಂದು ಕವಿ ವಿವರಣೆ ಕೊಡುತ್ತಾನೆ.

ಈ ಕೃತಿಯಲ್ಲಿ ಅಂದಿನ ಜನಪದ ನಂಬಿಕೆಗಳನ್ನು ಕಾಣಬಹುದಾಗಿದೆ.				    (ಆರ್.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ